ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History
ಕದಂಬ ಸಾಮ್ರಾಜ್ಯ: ಕರ್ನಾಟಕದ ಪ್ರಥಮ ಕನ್ನಡ ರಾಜವಂಶ
ಕರ್ನಾಟಕದ ಮಣ್ಣಿನಲ್ಲಿ ಮೊಟ್ಟಮೊದಲ ಬಾರಿಗೆ 'ಕನ್ನಡ'ವನ್ನೇ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು, ಸ್ವತಂತ್ರ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಕದಂಬರಿಗೆ ಸಲ್ಲುತ್ತದೆ.
ಕ್ರಿ.ಶ. 345 ರಿಂದ 525 ರವರೆಗೆ ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಈ ವಂಶವು ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಅಳಿವಿಲ್ಲದ ಕೊಡುಗೆ ನೀಡಿದೆ.
ಸ್ಥಾಪಕ -> ಮಯೂರಶರ್ಮ
ರಾಜಧಾನಿ -> ಬನವಾಸಿ
ಲಾಂಛನ -> ಸಿಂಹ
ಧ್ವಜ -> ವಾನರ ಧ್ವಜ
ಪ್ರಸಿದ್ಧ ದೊರೆ -> ಕಾಕುತ್ಸವರ್ಮ
ಮೊದಲ ಶಾಸನ -> ಹಲ್ಮಿಡಿ ಶಾಸನ
ಆಡಳಿತ ಭಾಷೆ->ಕನ್ನಡ
1. ಸ್ಥಾಪನೆ ಮತ್ತು ಮೂಲ
ಕದಂಬ ವಂಶದ ಸ್ಥಾಪಕ ಮಯೂರಶರ್ಮ. ಇವರು ಮೂಲತಃ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಕಾಂಚೀಪುರದ ಪಲ್ಲವರ ಘಟಿಕಾಸ್ಥಾನಕ್ಕೆ ತೆರಳಿದಾಗ, ಅಲ್ಲಿನ ಪಲ್ಲವ ಅಶ್ವಸವಾರರಿಂದ ಅವಮಾನಕ್ಕೊಳಗಾದರು.
ಈ ಅವಮಾನವೇ ಒಂದು ಸಾಮ್ರಾಜ್ಯದ ಉದಯಕ್ಕೆ ಕಾರಣವಾಯಿತು. ಲೇಖನಿಯನ್ನು ಬಿಟ್ಟು ಖಡ್ಗ ಹಿಡಿದ ಮಯೂರಶರ್ಮ, ಪಲ್ಲವರನ್ನು ಸೋಲಿಸಿ ಬನವಾಸಿಯಲ್ಲಿ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದನು.
2. ರಾಜಕೀಯ ಇತಿಹಾಸ ಮತ್ತು ಪ್ರಮುಖ ರಾಜರು
ಮಯೂರಶರ್ಮ (ಕ್ರಿ.ಶ. 345-365): ಸಾಮ್ರಾಜ್ಯದ ಸ್ಥಾಪಕ. ಪಲ್ಲವರನ್ನು ಸೋಲಿಸಿ 'ಮಯೂರವರ್ಮ' ಎಂದು ಹೆಸರು ಬದಲಿಸಿಕೊಂಡು ಕ್ಷತ್ರಿಯ ಧರ್ಮ ಸ್ವೀಕರಿಸಿದನು.
ಕಾಕುತ್ಸವರ್ಮ (ಕ್ರಿ.ಶ. 435-450):
ಕದಂಬರಲ್ಲೇ ಅತ್ಯಂತ ಪ್ರಭಾವಿ ರಾಜ. ಇವನ ಕಾಲದಲ್ಲಿ ಸಾಮ್ರಾಜ್ಯವು ಉತ್ತುಂಗಕ್ಕೇರಿತು.
ಗುಪ್ತರು ಮತ್ತು ವಾಕಾಟಕರಂತಹ ದೊಡ್ಡ ಸಾಮ್ರಾಜ್ಯಗಳೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದ್ದನು.
ಇವನ ಕಾಲವನ್ನು ಕದಂಬರ 'ಸುವರ್ಣ ಯುಗ' ಎನ್ನಲಾಗುತ್ತದೆ.
3. ಮಿಲಿಟರಿ ಸಾಧನೆಗಳು ಮತ್ತು ಯುದ್ಧಗಳು
ಕದಂಬರು ಕೇವಲ ಆಡಳಿತಗಾರರಲ್ಲದೆ ಶ್ರೇಷ್ಠ ಯೋಧರಾಗಿದ್ದರು.
ಪಲ್ಲವರ ವಿರುದ್ಧ ಯುದ್ಧ:
ಮಯೂರಶರ್ಮನು ಶ್ರೀಶೈಲದ ದಟ್ಟಾರಣ್ಯವನ್ನು ತನ್ನ ಕೇಂದ್ರವನ್ನಾಗಿಸಿಕೊಂಡು ಪಲ್ಲವರ ಮೇಲೆ ನಿರಂತರ ದಾಳಿ ಮಾಡಿ ಅವರ ಅಧಿಪತ್ಯವನ್ನು ಕೊನೆಗಾಣಿಸಿದನು.
ಗಂಗರು ಮತ್ತು ಬಾಣರೊಂದಿಗೆ ಸಂಘರ್ಷ: ನೆರೆಹೊರೆಯ ಸಣ್ಣ ರಾಜ್ಯಗಳನ್ನು ಸೋಲಿಸಿ ಇಡೀ ಕರ್ನಾಟಕದ ಬಹುಭಾಗವನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿದ್ದರು.
4. ಆಡಳಿತ ವ್ಯವಸ್ಥೆ
ಕದಂಬರ ಆಡಳಿತವು ವಿಕೇಂದ್ರೀಕರಣಕ್ಕೆ ಉತ್ತಮ ಉದಾಹರಣೆಯಾಗಿತ್ತು.
ಕೇಂದ್ರ ಆಡಳಿತ: ರಾಜನು ಸರ್ವಾಧಿಕಾರಿಯಾಗಿದ್ದರೂ ಮಂತ್ರಿಮಂಡಲದ ಸಲಹೆ ಪಡೆಯುತ್ತಿದ್ದನು. 'ಪ್ರಧಾನ ಮಂತ್ರಿ', 'ಮನೆವೆರ್ಗಡೆ' (ಅರಮನೆಯ ಮೇಲ್ವಿಚಾರಕ), 'ತಂತ್ರಪಾಲ' ಮುಂತಾದ ಹುದ್ದೆಗಳಿದ್ದವು.
ಆಡಳಿತ ವಿಭಾಗಗಳು:
ದೇಶ: ಅತಿದೊಡ್ಡ ವಿಭಾಗ.
ವಿಷಯ: ಇಂದಿನ ಜಿಲ್ಲೆಯಂತಿದ್ದು, ಇದರ ಮುಖ್ಯಸ್ಥ ವಿಷಯಪತಿ.
ನಾಡು: ತಾಲೂಕಿನಂತಿದ್ದು, ಇದರ ಮುಖ್ಯಸ್ಥ ನಾಡಗೌಡ.
ಗ್ರಾಮ: ಆಡಳಿತದ ಕೊನೆಯ ಘಟಕ. ಇದರ ಮುಖ್ಯಸ್ಥ ಗ್ರಾಮಕೂಟ (ಗೌಡ).
ಪ್ರಮುಖ ಆಡಳಿತ ಅಧಿಕಾರಿಗಳು:
ಪ್ರಧಾನ: ಮುಖ್ಯಮಂತ್ರಿ.
ಮನೆವೆರ್ಗಡೆ: ಅರಮನೆಯ ವ್ಯವಹಾರಗಳ ಉಸ್ತುವಾರಿ.
ತಂತ್ರಪಾಲ: ವಿದೇಶಾಂಗ ವ್ಯವಹಾರಗಳ ಮಂತ್ರಿ.
ಸಂಧಿವಿಗ್ರಹಿ: ಯುದ್ಧ ಮತ್ತು ಶಾಂತಿ ಒಪ್ಪಂದಗಳ ಮಂತ್ರಿ.
ಶ್ರೀಕರಣ: ದಾಖಲೆಗಳನ್ನು ನಿರ್ವಹಿಸುವ ಮುಖ್ಯಸ್ಥ.
5. ಭಾಷೆ ಮತ್ತು ಸಾಹಿತ್ಯ
ಕನ್ನಡ ಭಾಷೆಯ ಅಧಿಕೃತ ಇತಿಹಾಸವು ಕದಂಬರಿಂದಲೇ ಪ್ರಾರಂಭವಾಗುತ್ತದೆ.
ಹಲ್ಮಿಡಿ ಶಾಸನ (ಕ್ರಿ.ಶ. 450):
ಇದು ನಮಗೆ ಲಭ್ಯವಿರುವ ಅತ್ಯಂತ ಹಳೆಯ ಕನ್ನಡ ಶಾಸನ. ಕಾಕುತ್ಸವರ್ಮನ ಕಾಲದ ಈ ಶಾಸನವು ಕನ್ನಡದ ಪ್ರಾಚೀನತೆಗೆ ಪುರಾವೆಯಾಗಿದೆ.
ತಾಳಗುಂದ ಶಾಸನ:
ಇದನ್ನು ಕವಿ ಕುಬ್ಜ ಎಂಬುವನು ರಚಿಸಿದನು. ಇದು ಸಂಸ್ಕೃತದಲ್ಲಿದ್ದರೂ, ಕದಂಬರ ಇತಿಹಾಸವನ್ನು ಕಾವ್ಯಾತ್ಮಕವಾಗಿ ವರ್ಣಿಸುತ್ತದೆ.
ಸಂಸ್ಕೃತ ಪ್ರೋತ್ಸಾಹ:
ಕನ್ನಡದ ಜೊತೆಗೆ ಸಂಸ್ಕೃತಕ್ಕೂ ಹೆಚ್ಚಿನ ಆದ್ಯತೆ ಇತ್ತು. ತಾಳಗುಂದ ಶಾಸನವು ಅತ್ಯಂತ ಸುಂದರವಾದ ಸಂಸ್ಕೃತ ಕಾವ್ಯ ಶೈಲಿಯಲ್ಲಿದೆ.
ಕದಂಬರ ಕಾಲದಲ್ಲಿ ಶಿಕ್ಷಣ ಕೇಂದ್ರಗಳೆಂದರೆ:
ಘಟಿಕಾಸ್ಥಾನಗಳು:
ಇವು ಇಂದಿನ ವಿಶ್ವವಿದ್ಯಾಲಯಗಳಿದ್ದಂತೆ. ಕಂಚಿ ಮತ್ತು ತಾಳಗುಂದದಲ್ಲಿ ಪ್ರಸಿದ್ಧ ಘಟಿಕಾಸ್ಥಾನಗಳಿದ್ದವು.
ತಾಳಗುಂದ (ಸ್ಥಾನಕುಂದೂರು): ಇದು ಅಂದಿನ ಕಾಲದ ಅತ್ಯಂತ ಪ್ರಸಿದ್ಧ ಅಗ್ರಹಾರ ಮತ್ತು ಶೈಕ್ಷಣಿಕ ಕೇಂದ್ರವಾಗಿತ್ತು.
ಬನವಾಸಿ: ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು.
6. ಕಲೆ ಮತ್ತು ವಾಸ್ತುಶಿಲ್ಪ
ಕದಂಬರು ಭಾರತೀಯ ವಾಸ್ತುಶಿಲ್ಪಕ್ಕೆ 'ಕದಂಬ ಶಿಖರ' ಎಂಬ ಹೊಸ ಶೈಲಿಯನ್ನು ನೀಡಿದರು.
'ಕದಂಬ ಶೈಲಿ'
ವೈಶಿಷ್ಟ್ಯ:
ಇವರ ದೇವಾಲಯಗಳ ಗೋಪುರವು ಮೆಟ್ಟಿಲು ಮೆಟ್ಟಿಲುಗಳಂತೆ ಮೇಲೆ ಹೋಗುತ್ತಾ ಹೋಗುತ್ತದೆ.
ಪ್ರಮುಖ ದೇವಾಲಯಗಳು:
ಬನವಾಸಿಯ ಮಧುಕೇಶ್ವರ ದೇವಾಲಯ.
ಹಳಸಿಯ ಜೈನ ಬಸದಿಗಳು ಮತ್ತು ವರಾಹ ನರಸಿಂಹ ದೇವಾಲಯ.
ಕದಂಬರ ವಾಸ್ತುಶಿಲ್ಪವು ನಂತರದ ಕಾಲದ ಹೊಯ್ಸಳ ಮತ್ತು ಚಾಲುಕ್ಯ ಶೈಲಿಗೆ ಸ್ಫೂರ್ತಿಯಾಯಿತು.
7. ಧರ್ಮ ಮತ್ತು ಸಂಸ್ಕೃತಿ
ಕದಂಬರು ವೈದಿಕ ಧರ್ಮದ ಅನುಯಾಯಿಗಳಾಗಿದ್ದರೂ ಅತ್ಯಂತ ಸಹಿಷ್ಣುಗಳಾಗಿದ್ದರು. ರಾಜರು ಅಶ್ವಮೇಧ ಯಾಗಗಳನ್ನು ಮಾಡುತ್ತಿದ್ದರೂ, ಜೈನ ಮತ್ತು ಬೌದ್ಧ ವಿಹಾರಗಳಿಗೆ ಉದಾರವಾಗಿ ದತ್ತಿಗಳನ್ನು ನೀಡುತ್ತಿದ್ದರು.
ಹಳಸಿಯು ಆ ಕಾಲದ ಪ್ರಮುಖ ಜೈನ ಕೇಂದ್ರವಾಗಿತ್ತು.
8. ಆರ್ಥಿಕತೆ ಮತ್ತು ವ್ಯಾಪಾರ
ಕೃಷಿಯೇ ಪ್ರಮುಖ ಆಧಾರವಾಗಿತ್ತು. ಬನವಾಸಿಯು ಅಂತರಾಷ್ಟ್ರೀಯ ವ್ಯಾಪಾರ ಕೇಂದ್ರವಾಗಿತ್ತು. ಸಾಂಬಾರ ಪದಾರ್ಥಗಳು, ಶ್ರೀಗಂಧ ಮತ್ತು ಬಟ್ಟೆಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು. ಕದಂಬರ ನಾಣ್ಯಗಳನ್ನು 'ಪದ್ಮಟಂಕ' ಎಂದು ಕರೆಯಲಾಗುತ್ತಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ