ಕರ್ನಾಟಕ ಯುದ್ಧಗಳು: ಇತಿಹಾಸ, ಕಾರಣಗಳು ಮತ್ತು ಫಲಿತಾಂಶಗಳ ಸಮಗ್ರ ಮಾಹಿತಿ (1746 - 1763)

 


ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆ: ಕರ್ನಾಟಕ ಯುದ್ಧಗಳ ಸಮಗ್ರ ವಿವರಣೆ

ಭಾರತದ ಇತಿಹಾಸದಲ್ಲಿ 18ನೇ ಶತಮಾನವು ಅತ್ಯಂತ ಮಹತ್ವದ ತಿರುವುಗಳನ್ನು ನೀಡಿದ ಕಾಲ. ಮೊಘಲ್ ಸಾಮ್ರಾಜ್ಯದ ಅವನತಿಯ ನಂತರ ಭಾರತದಲ್ಲಿ ರಾಜಕೀಯ ಅಸ್ಥಿರತೆ ಉಂಟಾಯಿತು. ಈ ಸಂದರ್ಭವನ್ನು ಬಳಸಿಕೊಂಡು ವಿದೇಶಿ ವ್ಯಾಪಾರಿ ಕಂಪನಿಗಳಾದ ಬ್ರಿಟಿಷ್ ಮತ್ತು ಫ್ರೆಂಚರು ಭಾರತದಲ್ಲಿ ತಮ್ಮ ರಾಜಕೀಯ ಮೇಲುಗೈ ಸಾಧಿಸಲು ಮುಂದಾದರು. ಇದರ ಪರಿಣಾಮವೇ ಇತಿಹಾಸ ಪ್ರಸಿದ್ಧ 'ಕರ್ನಾಟಕ ಯುದ್ಧಗಳು' (Carnatic Wars).


ಕರ್ನಾಟಿಕ ಯುದ್ಧಗಳ ಹಿನ್ನೆಲೆ

ಇಂಗ್ಲಿಷ್ ಮತ್ತು ಫ್ರೆೆಂಚ್ ಕಂಪನಿಗಳು ಮೂಲತಃ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದವು. ಆದರೆ ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣದ ನಂತರ ಮೊಘಲ್ ಸಾಮ್ರಾಜ್ಯವು ದುರ್ಬಲಗೊಂಡಿತು. ಈ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯನ್ನು ಬ್ರಿಟಿಷರು ಮತ್ತು ಫ್ರೆಂಚರು ತಮ್ಮ ಲಾಭಕ್ಕಾಗಿ ಬಳಸಿಕೊಂಡರು. ಸುಮಾರು 20 ವರ್ಷಗಳ ಕಾಲ ನಡೆದ ಈ ಸಂಘರ್ಷಗಳು ಕರ್ನಾಟಕ ಪ್ರದೇಶದಲ್ಲಿ ಜರುಗಿದ್ದರಿಂದ ಇವುಗಳನ್ನು 'ಕರ್ನಾಟಕ ಯುದ್ಧಗಳು' ಎನ್ನಲಾಗುತ್ತದೆ.


1. ಮೊದಲನೇ ಕರ್ನಾಟಿಕ ಯುದ್ಧ (ಕ್ರಿ.ಶ. 1746 - 1748)

ಕಾರಣ:ಯುರೋಪಿನಲ್ಲಿ ಆಸ್ಟ್ರಿಯಾದ ಉತ್ತರಾಧಿಕಾರಕ್ಕಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ಯುದ್ಧ ಆರಂಭವಾಯಿತು. ಇದರ ಪ್ರತಿಫಲನವಾಗಿ ಭಾರತದಲ್ಲೂ ಈ ಎರಡು ಕಂಪನಿಗಳ ನಡುವೆ ಯುದ್ಧ ಪ್ರಾರಂಭವಾಯಿತು.




ಪ್ರಮುಖ ಘಟನೆ: ಫ್ರೆಂಚ್ ಗವರ್ನರ್ ಡೂಪ್ಲೆಯು ಮಾರಿಷಸ್‌ನ ಫ್ರೆಂಚ್ ಸೇನಾಪತಿ ಲಾ-ಬೋರ್ಡೋನಾಯಿಸ್‌ನ ನೆರವಿನಿಂದ ಮದ್ರಾಸ್‌ ಅನ್ನು ವಶಪಡಿಸಿಕೊಂಡನು. ಅಸಹಾಯಕನಾದ ಬ್ರಿಟಿಷ್ ಗವರ್ನರ್ ಅರ್ಕಾಟ್‌ನ ನವಾಬ ಅನ್ವರುದ್ದೀನ್‌ನ ಸಹಾಯ ಕೋರಿದನು.


ಅಡಿಯಾರ್ ಕದನ: ಅನ್ವರುದ್ದೀನ್‌ನ ಸೈನ್ಯ ಮತ್ತು ಫ್ರೆಂಚ್ ಸೈನ್ಯದ ನಡುವೆ ನಡೆದ ಈ ಕದನದಲ್ಲಿ ಶಿಸ್ತುಬದ್ಧ ಫ್ರೆಂಚ್ ಸೈನ್ಯವು ಜಯಗಳಿಸಿತು.


ಅಂತ್ಯ: ಯುರೋಪಿನಲ್ಲಿ ನಡೆದ 'ಎಕ್ಸ್‌ಲಾ ಶಾ ಪೆಲ್' ಒಪ್ಪಂದದೊಂದಿಗೆ ಈ ಯುದ್ಧವು ಕೊನೆಗೊಂಡಿತು. ಮದ್ರಾಸ್ ಅನ್ನು ಬ್ರಿಟಿಷರಿಗೆ ಮರಳಿ ನೀಡಲಾಯಿತು.



2. ಎರಡನೇ ಕರ್ನಾಟಿಕ ಯುದ್ಧ (ಕ್ರಿ.ಶ. 1749 - 1754)

ಕಾರಣ: ಹೈದರಾಬಾದ್ ಮತ್ತು ಕರ್ನಾಟಕದ ಸಿಂಹಾಸನಕ್ಕಾಗಿ ಉಂಟಾದ ಆಂತರಿಕ ಕಲಹಗಳು ಈ ಯುದ್ಧಕ್ಕೆ ಪ್ರಮುಖ ಕಾರಣ.




ಹೈದರಾಬಾದ್: ನಾಸಿರ್ ಜಂಗ್ ಮತ್ತು ಮುಜಫರ್ ಜಂಗ್ ನಡುವೆ ಸ್ಪರ್ಧೆ.


ಕರ್ನಾಟಕ: ಅನ್ವರುದ್ದೀನ್ ಮತ್ತು ಚಂದಾಸಾಹೇಬನ ನಡುವೆ ಸ್ಪರ್ಧೆ.


ಬಣಗಳು: ಬ್ರಿಟಿಷರು ನಾಸಿರ್ ಜಂಗ್ ಮತ್ತು ಅನ್ವರುದ್ದೀನ್‌ನನ್ನು ಬೆಂಬಲಿಸಿದರೆ, ಫ್ರೆಂಚರು ಮುಜಫರ್ ಜಂಗ್ ಮತ್ತು ಚಂದಾಸಾಹೇಬನನ್ನು ಬೆಂಬಲಿಸಿದರು.


ಅಂಬೂರು ಕದನ: ಈ ಕದನದಲ್ಲಿ ಅನ್ವರುದ್ದೀನ್ ಕೊಲ್ಲಲ್ಪಟ್ಟನು. ಚಂದಾಸಾಹೇಬನು ಕರ್ನಾಟಕದ ನವಾಬನಾದನು.


ರಾಬರ್ಟ್ ಕ್ಲೈವ್‌ನ ಪಾತ್ರ: ಬ್ರಿಟಿಷ್ ಅಧಿಕಾರಿ ರಾಬರ್ಟ್ ಕ್ಲೈವ್ ಅರ್ಕಾಟ್ ಮೇಲೆ ದಾಳಿ ಮಾಡಿ ಚಂದಾಸಾಹೇಬನನ್ನು ಸೋಲಿಸಿ ಕೊಂದನು. ಅನ್ವರುದ್ದೀನ್‌ನ ಮಗ ಮಹಮದ್ ಅಲಿಯನ್ನು ನವಾಬನನ್ನಾಗಿ ಮಾಡಲಾಯಿತು.


ಅಂತ್ಯ: ಡೂಪ್ಲೆಯು ಫ್ರಾನ್ಸ್‌ಗೆ ವಾಪಸ್ ಕರೆಸಿಕೊಳ್ಳಲ್ಪಟ್ಟನು. 'ಪಾಂಡಿಚೇರಿ ಒಪ್ಪಂದ'ದೊಂದಿಗೆ ಯುದ್ಧವು ಮುಕ್ತಾಯವಾಯಿತು.


3. ಮೂರನೇ ಕರ್ನಾಟಿಕ ಯುದ್ಧ (ಕ್ರಿ.ಶ. 1758 - 1763)


ಕಾರಣ: ಯುರೋಪಿನಲ್ಲಿ ಸಪ್ತವಾರ್ಷಿಕ ಯುದ್ಧಗಳು (Seven Years War) ಆರಂಭವಾದ ಕಾರಣ ಭಾರತದಲ್ಲೂ ಬ್ರಿಟಿಷರು ಮತ್ತು ಫ್ರೆಂಚರು ಕಾದಾಟಕ್ಕೆ ಇಳಿದರು.





ವ್ಯಾಂಡಿವಾಷ್ ಕದನ (1760): ಬ್ರಿಟಿಷ್ ಸೇನಾಪತಿ ಸರ್ ಐರ್ ಕೂಟ್ ಫ್ರೆಂಚ್ ಸೇನಾಪತಿ ಕೌಂಟ್-ಡಿ-ಲಾಲಿಯನ್ನು ಸೋಲಿಸಿದನು. ಪಾಂಡಿಚೇರಿ ಸೇರಿದಂತೆ ಫ್ರೆಂಚರ ಎಲ್ಲಾ ನೆಲೆಗಳು ಬ್ರಿಟಿಷರ ವಶವಾದವು.


ಅಂತ್ಯ: ಯುರೋಪಿನಲ್ಲಿ ನಡೆದ 'ಪ್ಯಾರಿಸ್ ಒಪ್ಪಂದ'ದೊಂದಿಗೆ ಈ ಯುದ್ಧವು ಕೊನೆಗೊಂಡಿತು. ಫ್ರೆಂಚರಿಗೆ ಅವರ ವ್ಯಾಪಾರ ಕೇಂದ್ರಗಳನ್ನು ಮರಳಿಸಲಾಯಿತಾದರೂ, ಅವರು ಭಾರತದಲ್ಲಿ ಕೇವಲ ವ್ಯಾಪಾರಿಗಳಾಗಿ ಉಳಿಯಬೇಕಾಯಿತು.



ಮುಖ್ಯಾಂಶಗಳು:

1ನೇ ಕರ್ನಾಟಕ ಯುದ್ಧ: ಈ ಯುದ್ಧವು ಯುರೋಪಿನಲ್ಲಿ ನಡೆದ 'ಎಕ್ಸ್‌ಲಾ ಚಾಪೆಲ್' ಒಪ್ಪಂದದೊಂದಿಗೆ ಮುಕ್ತಾಯವಾಯಿತು.


2ನೇ ಕರ್ನಾಟಕ ಯುದ್ಧ: ಇದು ಹೈದರಾಬಾದ್ ಮತ್ತು ಕರ್ನಾಟಕದ ಉತ್ತರಾಧಿಕಾರ ಕಲಹದಿಂದ ಆರಂಭವಾಯಿತು ಮತ್ತು'ಪಾಂಡಿಚೇರಿ ಒಪ್ಪಂದ' ದೊಂದಿಗೆ ಅಂತ್ಯಗೊಂಡಿತು.


3ನೇ ಕರ್ನಾಟಕ ಯುದ್ಧ: ಈ ಯುದ್ಧದಲ್ಲಿ ಫ್ರೆಂಚರು ಸಂಪೂರ್ಣವಾಗಿ ಸೋತು ಭಾರತದಲ್ಲಿ ತಮ್ಮ ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡರು.


ಭಾರತದಲ್ಲಿ ಫ್ರೆಂಚರ ಸೋಲಿಗೆ ಕಾರಣಗಳು:-

ನೌಕಾದಳದ ಬಲ: ಬ್ರಿಟಿಷರು ಫ್ರೆಂಚರಿಗಿಂತ ಪ್ರಬಲವಾದ ನೌಕಾದಳವನ್ನು ಹೊಂದಿದ್ದರು.


ಕಂಪನಿಗಳ ಸ್ವರೂಪ: ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಖಾಸಗಿ ಸಂಸ್ಥೆಯಾಗಿದ್ದು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು. ಫ್ರೆಂಚ್ ಕಂಪನಿಯು ಸರ್ಕಾರದ ಹತೋಟಿಯಲ್ಲಿದ್ದು ನಿರ್ಧಾರಗಳಿಗೆ ವಿಳಂಬವಾಗುತ್ತಿತ್ತು.


ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯ: ಫ್ರೆಂಚ್ ಅಧಿಕಾರಿಗಳಾದ ಡೂಪ್ಲೆ ಮತ್ತು ಲಾಲಿಯ ನಡುವೆ ಹೊಂದಾಣಿಕೆ ಇರಲಿಲ್ಲ.


ಆರ್ಥಿಕ ಸಂಪನ್ಮೂಲ: ಬ್ರಿಟಿಷರು ಬಂಗಾಳದಂತಹ ಸಮೃದ್ಧ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದರಿಂದ ಅವರ ಆರ್ಥಿಕ ಸ್ಥಿತಿ ಭದ್ರವಾಗಿತ್ತು.


ತೀರ್ಮಾನ: ಈ ಯುದ್ಧಗಳ ನಂತರ ಫ್ರೆಂಚರು ಭಾರತದಲ್ಲಿ ತಮ್ಮ ರಾಜಕೀಯ ಆಸೆಯನ್ನು ಕೈಬಿಡಬೇಕಾಯಿತು. ಬ್ರಿಟಿಷರು ದಕ್ಷಿಣ ಭಾರತದಲ್ಲಿ ಏಕಸ್ವಾಮ್ಯವನ್ನು ಸಾಧಿಸಿ, ಇಡೀ ಭಾರತವನ್ನು ಆಳುವ ಹಾದಿಯನ್ನು ಸುಗಮಗೊಳಿಸಿಕೊಂಡರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History