ಇತಿಹಾಸ ದರ್ಪಣ: ಭಾರತಕ್ಕೆ ಯುರೋಪಿಯನ್ನರ ಆಗಮನ
ಭಾರತಕ್ಕೆ ಯುರೋಪಿಯನ್ನರ ಆಗಮನ:
ಭಾರತವು ಪ್ರಾಚೀನ ಕಾಲದಿಂದಲೂ ತನ್ನ ಸಾಂಬಾರ ಪದಾರ್ಥಗಳು, ರೇಷ್ಮೆ ಮತ್ತು ಮಸ್ಲಿನ್ ಬಟ್ಟೆಗಳಿಗೆ ವಿಶ್ವವಿಖ್ಯಾತವಾಗಿತ್ತು. ಯುರೋಪಿಯನ್ನರು ಭಾರತದೊಂದಿಗೆ ವ್ಯಾಪಾರ ನಡೆಸಲು ಕಾತುರರಾಗಿದ್ದರು. 1453ರಲ್ಲಿ ಕಾನ್‌ಸ್ಟಾಂಟಿನೋಪಲ್ ನಗರವನ್ನು ಆಟೋಮನ್ ತುರ್ಕರು ವಶಪಡಿಸಿಕೊಂಡ ನಂತರ ಭೂಮಾರ್ಗವು ಮುಚ್ಚಿಹೋಯಿತು. ಇದು ಹೊಸ ಜಲಮಾರ್ಗದ ಹುಡುಕಾಟಕ್ಕೆ ನಾಂದಿಯಾಯಿತು.
1.ಪೋರ್ಚುಗೀಸರ ಯುಗ
ಪೋರ್ಚುಗೀಸರು ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದ ಮೊದಲ ಯುರೋಪಿಯನ್ನರು.
ವಾಸ್ಕೋಡಗಾಮ:
1498ರಲ್ಲಿ ಆಫ್ರಿಕಾದ ದಕ್ಷಿಣ ತುದಿ 'ಗುಡ್ ಹೋಪ್ ಭೂಶಿರ'ದ ಮೂಲಕ ಭಾರತದ ಕ್ಯಾಲಿಕಟ್‌ಗೆ ಬಂದಿಳಿದನು. ಇದು ಜಾಗತಿಕ ಇತಿಹಾಸದ ದಿಕ್ಕನ್ನೇ ಬದಲಿಸಿತು.
ಫ್ರಾನ್ಸಿಸ್ಕೋ ಡಿ ಅಲ್ಮೇಡಾ:
ಇವನು ಪೋರ್ಚುಗೀಸರ ಮೊದಲ ಗವರ್ನರ್. ಇವನು ಭಾರತದ ಸಮುದ್ರದ ಮೇಲೆ ಹತೋಟಿ ಸಾಧಿಸಲು 'ನೀಲಿ ನೀರಿನ ನೀತಿ' (Blue Water Policy) ಯನ್ನು ಜಾರಿಗೆ ತಂದನು. ಅಂದರೆ, ಭೂಭಾಗದ ಮೇಲೆ ಕೋಟೆ ಕಟ್ಟುವುಕಿಂತ ಸಮುದ್ರದಲ್ಲಿ ಬಲಿಷ್ಠ ನೌಕಾಪಡೆಯನ್ನು ಹೊಂದುವುದು ಇವನ ಗುರಿಯಾಗಿತ್ತು.
ಅಲ್ಫಾನ್ಸೊ ಡಿ ಅಲ್ಬುಕರ್ಕ್:
ಇವನನ್ನು ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎನ್ನಲಾಗುತ್ತದೆ. 1510ರಲ್ಲಿ ಬಿಜಾಪುರದ ಸುಲ್ತಾನನಿಂದ ಗೋವಾವನ್ನು ವಶಪಡಿಸಿಕೊಂಡಿದ್ದು ಇವನ ದೊಡ್ಡ ಸಾಧನೆ.
ಪತನ: ಪೋರ್ಚುಗೀಸರ ಕಟ್ಟುನಿಟ್ಟಾದ ಧಾರ್ಮಿಕ ನೀತಿ, ಗೋವಾದಲ್ಲಿನ ವಿಚಾರಣೆ ಬ್ರಿಟಿಷರ ಪ್ರಬಲ ನೌಕಾಪಡೆಯ ಮುಂದೆ ಇವರು ಸೋಲನ್ನು ಅನುಭವಿಸಿದರು.
ಡಚ್ಚರ ಆಗಮನ:-
ಡಚ್ಚರು (ನೆದರ್ಲ್ಯಾಂಡ್‌ನವರು) 1602ರಲ್ಲಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು.
ಇವರು ಮಸಾಲೆ ದ್ವೀಪಗಳಾದ ಇಂಡೋನೇಷ್ಯಾದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದರು.
ಭಾರತದಲ್ಲಿ ಪುಲಿಕಾಟ್, ಸೂರತ್ ಮತ್ತು ಮಚಲಿಪಟ್ಟಣಂಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ತೆರೆದರು.
1759ರ ಬೇಡ್ರಾ ಕದನದಲ್ಲಿ ಬ್ರಿಟಿಷರ ವಿರುದ್ಧ ಸೋತ ನಂತರ, ಇವರು ಭಾರತವನ್ನು ಬಿಟ್ಟು ಸಂಪೂರ್ಣವಾಗಿ ಇಂಡೋನೇಷ್ಯಾದತ್ತ ಗಮನ ಹರಿಸಿದರು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪ್ರಾಬಲ್ಯ:-
ಬ್ರಿಟಿಷರು ಭಾರತದಲ್ಲಿ ಅತ್ಯಂತ ಯಶಸ್ವಿಯಾದ ಯುರೋಪಿಯನ್ನರು.
ಸ್ಥಾಪನೆ: 1600 ಡಿಸೆಂಬರ್ 31ರಂದು ರಾಣಿ ಎಲಿಜಬೆತ್ ಕಂಪನಿಗೆ ವ್ಯಾಪಾರ ನಡೆಸಲು ಅನುಮತಿ ನೀಡಿದರು.
ರಾಯಭಾರ ಕಚೇರಿ: ಕೆಪ್ಟನ್ ಹಾಕಿನ್ಸ್ ಮತ್ತು ನಂತರ ಸರ್ ಥಾಮಸ್ ರೋ ಅವರು ಮೊಘಲ್ ದೊರೆ ಜಹಾಂಗೀರ್‌ನ ಆಸ್ಥಾನಕ್ಕೆ ಭೇಟಿ ನೀಡಿ ಸೂರತ್‌ನಲ್ಲಿ ವ್ಯಾಪಾರ ಮಾಡಲು ಪರವಾನಗಿ ಪಡೆದರು.
ವಿಸ್ತರಣೆ: ಇವರು ಮದ್ರಾಸ್‌ನಲ್ಲಿ ಫೋರ್ಟ್ ಸೈಂಟ್ ಜಾರ್ಜ್ ಮತ್ತು ಕಲ್ಕತ್ತಾದಲ್ಲಿ ಫೋರ್ಟ್ ವಿಲಿಯಂ ಎಂಬ ಬಲಿಷ್ಠ ಕೋಟೆಗಳನ್ನು ನಿರ್ಮಿಸಿದರು. ಬಾಂಬೆ ಇವರ ಪ್ರಮುಖ ಕೇಂದ್ರವಾಯಿತು.
ರಾಜಕೀಯ ಅಧಿಕಾರ: ಕೇವಲ ವ್ಯಾಪಾರಿಗಳಾಗಿ ಬಂದ ಇವರು ಭಾರತೀಯ ರಾಜರ ಆಂತರಿಕ ಜಗಳಗಳ ಲಾಭ ಪಡೆದು ಅಧಿಕಾರವನ್ನು ವಶಪಡಿಸಿಕೊಂಡರು.
4. ಫ್ರೆಂಚರು ಮತ್ತು ಕರ್ನಾಟಕ ಯುದ್ಧಗಳು
ಫ್ರೆಂಚರು ಭಾರತಕ್ಕೆ ಬಂದ ಕೊನೆಯ ಯುರೋಪಿಯನ್ನರು (1664).
ಪಾಂಡಿಚೇರಿ: ಫ್ರೆಂಚರ ಪ್ರಮುಖ ವ್ಯಾಪಾರ ಕೇಂದ್ರ ಮತ್ತು ರಾಜಧಾನಿಯಾಗಿತ್ತು.
ಡುಪ್ಲೆ:
ಫ್ರೆಂಚ್ ಗವರ್ನರ್ ಆಗಿದ್ದ ಡುಪ್ಲೆ ಅತ್ಯಂತ ಚತುರನಾಗಿದ್ದನು. ಇವನು ಭಾರತೀಯ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ತಂತ್ರವನ್ನು ರೂಪಿಸಿದನು.
ಕರ್ನಾಟಕ ಯುದ್ಧಗಳು: ಬ್ರಿಟಿಷರು ಮತ್ತು ಫ್ರೆಂಚರ ನಡುವೆ ಮೂರು ಕರ್ನಾಟಕ ಯುದ್ಧಗಳು ನಡೆದವು. ಅಂತಿಮವಾಗಿ 1760ರ ವಂದಿವಾಷ್ ಕದನದಲ್ಲಿ ಬ್ರಿಟಿಷರು ಗೆಲುವು ಸಾಧಿಸಿ, ಫ್ರೆಂಚರನ್ನು ಕೇವಲ ಸಣ್ಣ ಪ್ರದೇಶಗಳಿಗೆ ಸೀಮಿತಗೊಳಿಸಿದರು.
5. ಯುರೋಪಿಯನ್ನರ ಆಗಮನದ ಪರಿಣಾಮಗಳು:-
ಆರ್ಥಿಕತೆ: ಭಾರತದ ಸಂಪತ್ತು ಯುರೋಪ್ ರಾಷ್ಟ್ರಗಳಿಗೆ ಹರಿಯಿತು. ಹಸ್ತಕಲೆಗಳು ನಾಶವಾಗಿ ಯಂತ್ರಗಳಿಂದ ತಯಾರಾದ ವಸ್ತುಗಳ ಮಾರುಕಟ್ಟೆಯಾಯಿತು.
ರಾಜಕೀಯ: ಭಾರತದ ಸಣ್ಣ ಪುಟ್ಟ ರಾಜ್ಯಗಳು ಅಳಿದು ಬ್ರಿಟಿಷರ ಏಕಚಕ್ರಾಧಿಪತ್ಯ ಸ್ಥಾಪನೆಯಾಯಿತು.
ಸಂಸ್ಕೃತಿ: ಇಂಗ್ಲಿಷ್ ಶಿಕ್ಷಣ, ಹೊಸ ಕಾನೂನು ವ್ಯವಸ್ಥೆ ಮತ್ತು ರೈಲ್ವೆಯಂತಹ ಆಧುನಿಕ ಸೌಲಭ್ಯಗಳು ಪರಿಚಯಿಸಲ್ಪಟ್ಟವು. ಆದರೆ ಇದರೊಂದಿಗೆ ಸ್ಥಳೀಯ ಸಂಸ್ಕೃತಿಯ ಮೇಲೆ ದೊಡ್ಡ ಮಟ್ಟದ ಪ್ರಭಾವವುಂಟಾಯಿತು.
ತೀರ್ಮಾನ:
ಯುರೋಪಿಯನ್ನರ ಆಗಮನವು ಭಾರತದ ಇತಿಹಾಸದಲ್ಲಿ ಒಂದು ಹೊಸ ಪರ್ವವನ್ನು ಆರಂಭಿಸಿತು. ವ್ಯಾಪಾರಕ್ಕಾಗಿ ಬಂದವರು ರಾಜಕೀಯವಾಗಿ ಇಲ್ಲಿ ನೆಲೆಯೂರಿದ್ದು ದೇಶದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನೇ ಬದಲಿಸಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ