ಕನ್ನಡ ವರ್ಣಮಾಲೆ ಮತ್ತು ಅಕ್ಷರಗಳ ಉಚ್ಚಾರಣಾ ಸ್ಥಾನಗಳ ಸಮಗ್ರ ಮಾಹಿತಿ. ಕಂಠ್ಯದಿಂದ ಓಷ್ಠ್ಯದವರೆಗೆ
ಅಕ್ಷರಮಾಲೆ/ವರ್ಣಮಾಲೆ
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಇವುಗಳನ್ನು ಮುಖ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ:
1. ಸ್ವರಗಳು (13 ಅಕ್ಷರಗಳು)
ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತಾರೆ.
ಹ್ರಸ್ವಸ್ವರ (6): ಒಂದು ಮಾತ್ರೆ ಕಾಲದಲ್ಲಿ ಉಚ್ಚರಿಸುವವು. (ಅ, ಇ, ಉ, ಋ, ಎ, ಒ)
ದೀರ್ಘಸ್ವರ (7): ಎರಡು ಮಾತ್ರೆ ಕಾಲದಲ್ಲಿ ಉಚ್ಚರಿಸುವವು (ಆ, ಈ, ಊ, ಏ, ಐ, ಓ, ಔ).
2. ಯೋಗವಾಹಗಳು (2 ಅಕ್ಷರಗಳು)
ಇವುಗಳು ಬೇರೆ ಅಕ್ಷರಗಳ ಜೊತೆಗೂಡಿ ಉಚ್ಚರಿಸಲ್ಪಡುತ್ತವೆ.
ಅನುಸ್ವರ: ಅಂ (ಒಂದು ಸೊನ್ನೆ)
ವಿಸರ್ಗ: ಅಃ (ಎರಡು ಸೊನ್ನೆ)
3. ವ್ಯಂಜನಗಳು (34 ಅಕ್ಷರಗಳು)
ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳೇ ವ್ಯಂಜನಗಳು. ಇವುಗಳಲ್ಲಿ ಎರಡು ವಿಧ:
1. ವರ್ಗೀಯ ವ್ಯಂಜನಗಳು (25 ಅಕ್ಷರಗಳು):
ಇವುಗಳನ್ನು ಉಚ್ಚಾರಣಾ ಸ್ಥಾನಗಳಿಗೆ ಅನುಗುಣವಾಗಿ 5 ವರ್ಗಗಳಾಗಿ ವಿಂಗಡಿಸಲಾಗಿದೆ:
ಕ-ವರ್ಗ: ಕ ಖ ಗ ಘ ಙ
ಚ-ವರ್ಗ ಚ ಛ ಜ ಝ ಞ
ಟ-ವರ್ಗ ಟ ಠ ಡ ಢ ಣ
ತ-ವರ್ಗ ತ ಥ ದ ಧ ನ
ಪ-ವರ್ಗ ಪ ಫ ಬ ಭ ಮ
ಗಮನಿಸಿ: ಇವುಗಳಲ್ಲಿ ಅಲ್ಪಪ್ರಾಣ (ಕ, ಗ), ಮಹಾಪ್ರಾಣ (ಖ, ಘ) ಮತ್ತು ಅನುನಾಸಿಕ (ಙ, ಞ, ಣ, ನ, ಮ) ಎಂಬ ವಿಭಾಗಗಳಿವೆ.
2. ಅವರ್ಗೀಯ ವ್ಯಂಜನಗಳು (9 ಅಕ್ಷರಗಳು):
ಯಾವ ವರ್ಗಕ್ಕೂ ಸೇರದ ಅಕ್ಷರಗಳು:
ಯ, ರ, ಲ, ವ, ಶ, ಷ, ಸ, ಹ, ಳ.
ಸಂಯುಕ್ತಾಕ್ಷರಗಳು (ಒತ್ತಕ್ಷರ)
1. ಸಜಾತಿಯ ಸಂಯುಕ್ತಾಕ್ಷರ: ಒಂದೇ ಜಾತಿಯ ಎರಡು ವ್ಯಂಜನಗಳು ಸೇರಿದಾಗ ಉಂಟಾಗುತ್ತದೆ. (ಉದಾ: ಹಕ್ಕಿ, ಅಮ್ಮ).
2. ವಿಜಾತಿಯ ಸಂಯುಕ್ತಾಕ್ಷರ: ಬೇರೆ ಬೇರೆ ಜಾತಿಯ ವ್ಯಂಜನಗಳು ಸೇರಿದಾಗ ಉಂಟಾಗುತ್ತದೆ. (ಉದಾ: ಪುಸ್ತಕ, ವಿದ್ಯಾರ್ಥಿ).
ಕನ್ನಡ ವರ್ಣಮಾಲೆಯ ಅಕ್ಷರಗಳು ನಮ್ಮ ಬಾಯಿಯ ಯಾವ ಭಾಗದಿಂದ ಹುಟ್ಟುತ್ತವೆ ಎಂಬುದನ್ನು 'ವರ್ಣೋತ್ಪತ್ತಿ ಸ್ಥಾನ' ಎನ್ನಲಾಗುತ್ತದೆ.
ವರ್ಣೋತ್ಪತ್ತಿ ಸ್ಥಾನಗಳನ್ನು ಈ ಕೆಳಗಿನ 8 ಪ್ರಮುಖ ವಿಧಗಳಾಗಿ ವಿಂಗಡಿಸಬಹುದು:
ಕಂಠ್ಯಗಳು:- ಗಂಟಲಿನ ಭಾಗದಿಂದ ಉಚ್ಚರಿಸಲ್ಪಡುವ ಅಕ್ಷರಗಳು. ಅಕ್ಷರಗಳು: ಅ, ಆ, ಕ, ಖ, ಗ, ಘ, ಙ, ಹ ಮತ್ತು ವಿಸರ್ಗ (ಃ).
ತಾಲವ್ಯಗಳು:- ನಾಲಿಗೆಯ ಮಧ್ಯಭಾಗವು ಮೇಲ್ಭಾಗದ ದವಡೆಯನ್ನು (ಅಂಗುಳನ್ನು) ಸ್ಪರ್ಶಿಸಿದಾಗ ಹುಟ್ಟುವ ಅಕ್ಷರಗಳು.
ಅಕ್ಷರಗಳು: ಇ, ಈ, ಚ, ಛ, ಜ, ಝ, ಞ, ಯ, ಶ.
ಮೂರ್ಧನ್ಯಗಳು:- ನಾಲಿಗೆಯನ್ನು ಮಡಚಿ ಮೇಲ್ಭಾಗದ ಮುಂಭಾಗದ ಅಂಗುಳನ್ನು ಸ್ಪರ್ಶಿಸಿದಾಗ ಉಂಟಾಗುವ ಧ್ವನಿಗಳು.
ಅಕ್ಷರಗಳು: ಋ, ಟ, ಠ, ಡ, ಢ, ಣ, ರ, ಷ, ಳ
ದಂತ್ಯಗಳು:- ನಾಲಿಗೆಯ ತುದಿ ಮೇಲಿನ ಹಲ್ಲುಗಳನ್ನು ಸ್ಪರ್ಶಿಸಿದಾಗ ಹುಟ್ಟುವ ಅಕ್ಷರಗಳು.
ಅಕ್ಷರಗಳು: ತ, ಥ, ದ, ಧ, ನ, ಲ, ಸ.
ಓಷ್ಠ್ಯಗಳು:- ಮೇಲಿನ ಮತ್ತು ಕೆಳಗಿನ ತುಟಿಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳು.
ಅಕ್ಷರಗಳು: ಉ, ಊ, ಪ, ಫ, ಬ, ಭ, ಮ.
ಅನುನಾಸಿಕಗಳು:- ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳು (ಪ್ರತಿ ವರ್ಗದ 5ನೇ ಅಕ್ಷರ).
ಅಕ್ಷರಗಳು: ಙ, ಞ, ಣ, ನ, ಮ.
ಕಂಠತಾಲು:- ಗಂಟಲು ಮತ್ತು ಅಂಗುಳು ಎರಡರ ಸಹಾಯದಿಂದ ಹುಟ್ಟುವ ಅಕ್ಷರಗಳು.
ಅಕ್ಷರಗಳು: ಎ, ಏ, ಐ.
ಕಂಠೋಷ್ಠ್ಯ:- ಗಂಟಲು ಮತ್ತು ತುಟಿಗಳೆರಡರ ಸಹಾಯದಿಂದ ಹುಟ್ಟುವ ಅಕ್ಷರಗಳು.
ಅಕ್ಷರಗಳು: ಒ, ಓ, ಔ
ದಂತೋಷ್ಠ್ಯ:- ಹಲ್ಲು ಮತ್ತು ತುಟಿಗಳ ಸಹಾಯದಿಂದ ಉಚ್ಚಾರ 'ವ' ಅಕ್ಷರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ